ನದೀವೇದಿಕೆ
	ನದಿಗಳ ಪ್ರವಾಹ ಕ್ಷೇತ್ರಗಳಿಗಿಂತ ಎತ್ತರದಲ್ಲಿದ್ದು ಚಪ್ಪಟೆಯಾಗಿ ಜಗತಿಯಂತೆ ಕಾಣುವ ಭೂಭಾಗ (ರಿವರ್ ಟೆರೇಸ್). ನದಿ ಪುನರುಜ್ಜೀವನಗೊಂಡಿದ್ದರ (ರಿಜೂವಿನೇಷನ್) ಗುರುತು ಇದು. ಇದರ ಮೇಲೆ ಗುಂಡಾದ ಕಲ್ಲುಗಳ, ಮರಳಿನ ಮತ್ತು ಮೆಕ್ಕಲು ಮಣ್ಣಿನಿಂದ ಕೂಡಿದ ಹೊದಿಕೆ ಇರುವುದು. ಪ್ರಪಂಚದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೃಹದಾಕಾರದ ಸೋಪಾನ ಪಂಕ್ತಿಗಳಂತೆ ಗೋಚರವಾಗುವ ನದೀವೇದಿಕೆಗಳನ್ನು ಕಾಣಬಹುದು. ಪರ್ವತ, ಪ್ರಸ್ಥಭೂಮಿ ಇರುವೆಡೆಗಳಲ್ಲಿ ಭೂಭಾಗಗಳ ಏರಿಳಿತಗಳು ಆಗಾಗ್ಗೆ ಆಗಿವುದು ಸಹಜ. ಇದೇ ರೀತಿ ನದಿಯೂ ಮುಪ್ಪಾಗಿ ಶಿಲಾಕ್ಷಯದ ತಳಮಟ್ಟವನ್ನು ಮುಟ್ಟಿ, ಆ ನದೀಪ್ರಾಂತ್ಯದ ಮೇಲೆ ಭೂಶಕ್ತಿ ಪರಿಣಾಮ ಬೀರಿದಾಗ, ನದಿಗೆ ಮತ್ತೆ ಯೌವನ ಪ್ರಾಪ್ತಿಯಾಗುತ್ತದೆ. ಆಗ ಅದು ತನ್ನ ಹಿಂದಿನ ಕಣಿವೆಯನ್ನು ಕೊರೆದುಕೊಂಡು ಕೆಳಕ್ಕೆ ಹರಿದುಬರುವುದು. ಹಳೆಯ ಕಣಿವೆಯ ನಡುವೆ ಹೊಸ ಕಣಿವೆ ರೂಪುಗೊಂಡಾಗ ಜೋಡಿವೇದಿಕೆಗಳು ಏರ್ಪಡುವುದೂ ಉಂಟು. ಅಕ್ಕಪಕ್ಕದ ವೇದಿಕೆಗಳ ಅಂತರ ಕೆಲವೇ ಅಡಿಗಳಿಂದ ನೂರಾರು ಅಡಿಗಳಷ್ಟು ಇರಬಹುದು. ಪುನರುಜ್ಜೀವನಗೊಂಡ ನದಿಯ ಸ್ಥಿತಿಯನ್ನು ಅನುಸರಿಸಿ ಈ ವೇದಿಕೆಗಳು ಒಂಟಿಯಾಗಿಯೋ ಜೋಡಿಯಾಗಿಯೋ ಇರುವ ಸಾಧ್ಯತೆ ಇದೆ. ಗ್ರೇಟ್ ಬ್ರಿಟನ್, ಪಶ್ಚಿಮ ಯೂರೊಪಿನ ಕೆಲವು ಭಾಗಗಳು, ಬ್ರಿಟಿಷ್ ಕೊಲಂಬಿಯ ಮುಂತಾದ ಭಾಗಗಳಲ್ಲಿ ನದೀವೇದಿಕೆಗಳ ಸಾಲುಗಳು ಬಹಳ ಇವೆ. ಲಂಡನ್ ನಗರದ ಬಳಿ ಥೇಮ್ಸ್ ನದಿಯ ಮೂರು ವೇದಿಕೆಗಳ ಗುಂಪನ್ನು ಗುರ್ತಿಸಲಾಗಿದೆ. ಕರ್ನಾಟಕ ರಾಜ್ಯದ ವೇಣೂರಿನ ಗೊಮ್ಮಟೇಶ್ವರ ಮೂರ್ತಿ ನೇತ್ರಾವತಿಯ ನದೀವೇದಿಕೆಯ ಮೇಲಿದೆ. ನದೀವೇದಿಕೆಗಳು ವ್ಯವಸಾಯಕ್ಕೆ ಅನುಕೂಲವಾದ ಪ್ರದೇಶಗಳಾಗಿರುವುವಲ್ಲದೆ, ನದೀ ತೀರದ ನಗರಗಳ ನಿರ್ಮಾಣಕ್ಕೆ ಬಹಳಷ್ಟು ಉಚಿತವಾಗಿಯೂ ಇರುತ್ತವೆ. ಭೂಮಿಯ ಚಲನವಲನಗಳಿಂದಾಗಿ ಒಂದು ಪ್ರದೇಶದಲ್ಲಿ ಪದೇ ಪದೇ ನವೀಕರಣ ಕ್ರಿಯೆ ಉಂಟಾದಾಗ ಕೆಳಗಿನ ಮಟ್ಟಗಳಲ್ಲಿ ಉದ್ದವಾದ ಕಾಲ್ಮಣೆಗಳಂತಿರುವ ಅನೇಕ ವೇದಿಕೆಗಳು ಉಂಟಾಗುತ್ತವೆ. ಉಪನದಿಗಳ ಚಟುವಟಿಕೆಗಳಿಂದ ನದೀವೇದಿಕೆಗಳು ಉಂಟಾಗುವ ಬದಲಿಗೆ ವಿಶಾಲವಾದ, ಚಪ್ಪಟೆಯಾಗಿರುವ ಕಣಿವೆಯ ತಳ ಕೊರೆತಕ್ಕೆ ಈಡಾಗಬಹುದು. ಬೆಟ್ಟ ಪ್ರದೇಶದ ಅಗಲವಾದ ಈ ಕಣಿವೆಗಳ ಮೇಲ್ಬಾಗವೇ ಹಳೆಯ ಕಣಿವೆಯ ತಳವನ್ನು ಪ್ರತಿನಿಧಿಸುತ್ತದೆ.
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ